ಸಂಗಮೇಶ ಮುಶಿಗೇರಿ
ಸುದ್ದಿ ಸಮರ್ಪಣ |
ಕುಷ್ಟಗಿ : ಕಳೆದೊಂದು ತಿಂಗಳಿಂದ ಮಳೆ ಕೈಕೊಟ್ಟ ಪರಿಣಾಮ ತಾಲೂಕಿನ ರೈತಾಪಿ ವರ್ಗ ವರುಣನ ಕೃಪೆಗಾಗಿ ದೇವಸ್ಥಾನಗಳಲ್ಲಿ ಭಜನೆ, ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುತಿದ್ದಾರೆ.
ತಾಲೂಕಿನ ಕೊರಡಕೇರಾ ಗ್ರಾಮದ ರೈತಾಪಿ ವರ್ಗದ ಮಾತಂಗಿ ಬಳಗದ ಮಹಿಳೆಯರು ಮಳೆಗಾಗಿ ಪ್ರಾರ್ಥನೆ ಮಾಡುತಿದ್ದಾರೆ. ಗ್ರಾಮದ ಹೊರ ವಲಯದ ಜಮೀನೊಂದರಲ್ಲಿ ಇರುವ ಶ್ರೀ ಕರಿಯಮ್ಮದೇವಿ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಜಾನಪದ ಭಕ್ತಿ ಗೀತೆ, ರಾಮನಾಮ, ಹೀಗೇ ಮಳೆರಾಯನಿಗೆ ಪದಗಟ್ಟಿ ಹಾಡುತ್ತಿರುವುದು ಗಮನ ಸೆಳೆಯಿತು. ಕಳೆದೊಂದು ವಾರದಿಂದ ಮಹಿಳೆಯರು ಪ್ರಾರ್ಥನೆ ಸಲ್ಲಿಸುತ್ತಿರುವುದು ಗೊತ್ತಾಯಿತು.
ಮಳೆಯ ನಂಬಿ ಈಗಾಗಲೇ ಹಲಸಂದಿ, ಹೆಸರು, ಹತ್ತಿ, ಸಜ್ಜೆ, ಜೋಳ ಸೇರಿ ಇತರೆ ಬೆಳೆಗಳನ್ನು ಬಿತ್ತನೆ ಮಾಡಿರುವ ರೈತರು’ ಆರಿದ್ರ, ಪುನರ್ವಸು ಮಳೆಯ ನಿರೀಕ್ಷೆಯಲ್ಲಿದ್ದರು. ಆದರೆ, ಈ ವರೆಗೂ ಮಳೆರಾಯ ಭೂಮಿಗೆ ಸಮರ್ಪಕವಾಗಿ ತಂಪೆರೆಯದೇ ಇರುವುದರಿಂದ ರೈತರು ತೊಂದರೆಗೊಳಗಾಗಿದ್ದಾರೆ. ಹಾಗಾಗಿ ಬೆಳೆ ಉಳಿಸಿಕೊಳ್ಳಲು ರೈತಾಪಿ ವಲಯ ವರುಣನ ಕೃಪೆಗಾಗಿ ದೇವರ ಮೊರೆ ಹೋಗಿ ವಿಶೇಷ ಪ್ರಾರ್ಥನೆ ಸಲ್ಲಿಸುತಿದ್ದು, ವರುಣದೇವ ದಯೆತೋರಬೇಕಿದೆ.
ತಾಲೂಕಿನಲ್ಲಿ ಶನಿವಾರ ಮಳೆ ಸುರಿದ್ದು, ಕಂದಾಯ ಇಲಾಖೆಯು ಮಳೆ ಮಾಪನ ಕೇಂದ್ರಗಳಿಂದ ನೀಡಿರುವ ಮಳೆಯ ಪ್ರಮಾಣದ ವರದಿ ಹೀಗಿದೆ :
ಕುಷ್ಟಗಿ – 26.2 ಮಿಲಿ ಮೀಟರ್,
ಹನುಮಸಾಗರ – 10.1 ಮಿಲಿ ಮೀಟರ್,
ಹನುಮನಾಳ -19.6 ಮಿಲಿ ಮೀಟರ್,
ದೋಟಿಹಾಳ – 18.3 ಮಿಲಿ ಮೀಟರ್,
ಕಿಲ್ಲಾರಟ್ಟಿ – 11.4 ಮಿಲಿ ಮೀಟರ್,
ತಾವರಗೇರಾ – 8.4 ಮಿಲಿ ಮೀಟರ್ ಮಳೆಯಾಗಿದೆ ಎಂದು ಮಾಹಿತಿ ನೀಡಿದೆ.