ಸಂಗಮೇಶ ಮುಶಿಗೇರಿ
ಸುದ್ದಿ ಸಮರ್ಪಣ |
ಕುಷ್ಟಗಿ : ಹೈದರಾಬಾದ್ ಕರ್ನಾಟಕ ವಿಮೋಚನೆಯಲ್ಲಿ ತಾಲೂಕು ಸ್ವಾತಂತ್ರ್ಯ ಹೋರಾಟಗಾರರ ಪಾತ್ರ ಕುರಿತು ಪಟ್ಟಣದಲ್ಲಿ ಶುಕ್ರವಾರ ಪದವಿ ಕಾಲೇಜು ವಿದ್ಯಾರ್ಥಿಗಳಿಂದ ತಾಲೂಕು ಮಟ್ಟದ ಭಾಷಣ ಸ್ಪರ್ಧೆ ನಡೆಯಿತು.
ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹೈದರಾಬಾದ್ ಪ್ರಾಂತ್ಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪರಮಪೂಜ್ಯ ಮಹಾತಪಸ್ವಿ ಮುರಡಿ ಭೀಮಜ್ಜ ಅವರ 68ನೇ ಪುಣ್ಯತಿಥಿ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ಪುಂಡಲೀಕಪ್ಪ ಜ್ಞಾನಮೋಟೆ ಅವರ 11ನೇ ಪುಣ್ಯಸ್ಮರಣೆ ಪ್ರಯುಕ್ತ ಶ್ರೀ ಮುರಡಿ ಭೀಮಜ್ಜ ಪುಣ್ಯಸ್ಮರಣೆ ಆಚರಣೆ ಸಮಿತಿ ವತಿಯಿಂದ ಪದವಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಆರಾಳಗೌಡರ ಪದವಿ ಪೂರ್ವ ಕಾಲೇಜು, ಮರಿಶಾಂತವೀರ ಪದವಿ ಪೂರ್ವ ಕಾಲೇಜು, ಬುತ್ತಿಬಸವೇಶ್ವರ ಪದವಿ ಪೂರ್ವ ಕಾಲೇಜು ಹಾಗೂ ತಾಲೂಕಿನ ದೋಟಿಹಾಳ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹೈದರಾಬಾದ್ ಪ್ರಾಂತ ವಿಮೋಚನೆಗಾಗಿ ತಮ್ಮ ಕುಟುಂಬವನ್ನೇ ತೊರೆದು ಪ್ರಾಣ ತ್ಯಾಗ ಮಾಡಿ ಹೋರಾಡಿದ ಮಹನಿಯರ ಜೀವನಗಾಥೆಯನ್ನು ತಮ್ಮ ಭಾಷಣಗಳಲ್ಲಿ ಪ್ರಸ್ತುತಪಡಿಸಿದರು.
ಸ್ಪರ್ಧೆಯಲ್ಲಿ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸುಜಾತಾ ಮೇಟಿ ಪ್ರಥಮ ಸ್ಥಾನ, ಶ್ರೀ ಮರಿಶಾಂತವೀರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಕಾವೇರಿ ಕನ್ನಾಳ ದ್ವಿತೀಯ ಸ್ಥಾನ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿನಿ ಐಶ್ವರ್ಯ, ಶ್ರೀದೇವಿ ವಡಿಗೇರಿ ತೃತೀಯ ಸ್ಥಾನ ಪಡೆದುಕೊಂಡರು. ನಿರ್ಣಾಯಕರಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಮಲ್ಲಪ್ಪ ಕುದರಿ, ಉಪನ್ಯಾಸಕರಾದ ಶ್ರೀದೇವಿ, ಗ್ಯಾನಪ್ಪ ತಳವಾರ ಪಾಲ್ಗೊಂಡಿದ್ದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕಾಧ್ಯಕ್ಷ ವೀರೇಶ ಬಂಗಾರಶೆಟ್ಟರ ಅವರು ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಇಡೀ ಜೀವನವನ್ನು ಮುಡುಪಾಗಿಟ್ಟು ಹೋರಾಡಿದ ಸೇನಾನಿಗಳು ನಮಗೆ ಆದರ್ಶಪ್ರಾಯರಾಗಿ ನಿಲ್ಲುತ್ತಾರೆ. ಅಂತಹ ಮಹನೀಯರ ಜೀವನ ಸಾಧನೆ ಕುರಿತು ಓದಬೇಕು, ಇತಿಹಾಸ ಅರಿಯಬೇಕು. ಅಂತಹ ಸಾಧಕರ ಮೌಲ್ಯಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡು ಪ್ರಜ್ಞಾವಂತ ನಾಗರಿಕರಾಗಬೇಕು ಎಂದು ಕರೆ ನೀಡಿದರು. ಇದೇ ಜು.24 ರಂದು ಬಸವ ಭವನದಲ್ಲಿ ನಡೆಯಲಿರುವ ಸ್ವಾತಂತ್ರ್ಯ ಸೇನಾನಿಗಳ ಪುಣ್ಯತಿಥಿ ಹಾಗೂ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಷಣ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಗುತ್ತದೆ ಎಂದು ಹೇಳಿದರು.
ಶ್ರೀ ಮುರಡಿ ಭೀಮಜ್ಜ ಪುಣ್ಯಸ್ಮರಣೆ ಆಚರಣೆ ಸಮಿತಿ ಸದಸ್ಯರಾದ ಹಿರಿಯ ಪತ್ರಕರ್ತ ಮುಖೇಶ ನಿಲೋಗಲ್, ಎ.ವಾಯ್. ಲೋಕರೆ, ಸಂಚಾಲಕ ಅಮೃತರಾಜ ಜ್ಞಾನಮೋಟೆ, ಮಲ್ಲಪ್ಪ ಕುದರಿ, ಉಪನ್ಯಾಸಕ ಬಲರಾಮ ಜೋಷಿ, ಶಿಕ್ಷಕ ಮಹೇಶ ಜಿ.ಹೆಚ್. ಉಪಸ್ಥಿತರಿದ್ದರು. ವಿದ್ಯಾರ್ಥಿನಿ ವಿಜಯಲಕ್ಷ್ಮೀ ಕೂಡ್ಲೂರು ಪ್ರಾರ್ಥಿಸಿದರು. ಉಪನ್ಯಾಸಕ ಬಲರಾಮ ಜೋಷಿ ಸ್ವಾಗತಿಸಿದರು.