ಕುಷ್ಟಗಿ | ತಾಲೂಕಿನಾದ್ಯಂತ ಶರಣ ನಿಜಸುಖಿ ಹಡಪದ ಅಪ್ಪಣ್ಣ ಜಯಂತಿ ಸರಳ ಆಚರಣೆ

ಸುದ್ದಿ ಸಮರ್ಪಣ |

ಕುಷ್ಟಗಿ : ಜಗಜ್ಯೋತಿ ಬಸವಣ್ಣನವರ ಆಪ್ತ ಕಾರ್ಯದರ್ಶಿ ಶರಣ ನಿಜಸುಖಿ ಹಡಪದ ಅಪ್ಪಣ್ಣನವರ 890ನೇ ಜಯಂತಿಯನ್ನು ಭಾನುವಾರ ಬೆಳಿಗ್ಗೆ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸರಳವಾಗಿ ಆಚರಿಸಲಾಯಿತು.

ವಿವಿಧ ಸರ್ಕಾರಿ ಕಚೇರಿ, ಗ್ರಾಮ ಪಂಚಾಯಿತಿ, ಶಾಲಾ-ಕಾಲೇಜುಗಳಲ್ಲಿ ಹಾಗೂ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಸಂಘ-ಸಂಸ್ಥೆಗಳು ಹಾಗೂ ವಿವಿಧೆಡೆ ಹಲವು ಗಣ್ಯರು ಶರಣ ನಿಜಸುಖಿ ಹಡಪದ ಅಪ್ಪಣ್ಣನವರ ಭಾವಚಿತ್ರ ಪೂಜಿಸಿ ಪುಷ್ಪ ಸಮರ್ಪಿಸಿ ಗೌರವ ಸಲ್ಲಿಸಿದರು.

ಇಲ್ಲಿಯ ತಾಲೂಕು ಆಡಳಿತ ಕಚೇರಿಯಲ್ಲಿ ಶರಣ ನಿಜಸುಖಿ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಪುಷ್ಪ ಸಮರ್ಪಿಸಿ ಗೌರವ ಸಲ್ಲಿಸಲಾಯಿತು. ಈ ವೇಳೆ ಗ್ರೇಡ್-2 ತಹಸೀಲ್ದಾರ್ ಮುರಳೀಧರ ಮುಕ್ತೇದಾರ, ಬಸವ ಸಮಿತಿ ತಾಲೂಕಾಧ್ಯಕ್ಷ ಶಿವಸಂಗಪ್ಪ ಬಿಜಕಲ್, ನಿವೃತ್ತ ಮುಖ್ಯಶಿಕ್ಷಕ ಶಿವಪುತ್ರಪ್ಪ ಮಿಟ್ಟಲಕೋಡ್, ಶಿಕ್ಷಕ ಮಹೇಶ ಜಿ.ಹೆಚ್. ಅವರು ಮಾತನಾಡಿ, 12ನೇ ಶತಮಾನದಲ್ಲಿ ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಮೇಲು-ಕೀಳು, ಜಾತಿ ಪದ್ಧತಿ, ಮೌಢ್ಯ, ಕಂದಾಚಾರಗಳ ವಿರುದ್ಧ ಹೋರಾಡಿ ಸಮಸಮಾಜ ನಿರ್ಮಾಣಕ್ಕೆ ನಾಂದಿಹಾಡಿದರು. ಬಸವಾದಿ ಶರಣರಲ್ಲಿ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದ ನಿಜಸುಖಿ ಹಡಪದ ಅಪ್ಪಣ್ಣ ಹಾಗೂ ಅವರ ಧರ್ಮಪತ್ನಿ ಶರಣೆ ಲಿಂಗಮ್ಮನವರ ಪಾತ್ರವೂ ಮಹತ್ವದ್ದಾಗಿದೆ ಎಂದರು. ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ ಮಾಡಿದರಷ್ಟೇ ಸಾಲದು ಬಸವಾದಿ ಶರಣರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.

ಈ ವೇಳೆ ನಿವೃತ್ತ ಶಿಕ್ಷಕ ಶರಣಪ್ಪ ಜಿಗೇರಿ, ಕಲಾವಿದ ಮಲ್ಲನಗೌಡ ಅಗಸಿಮುಂದಿನ, ಕಂದಾಯ ನಿರೀಕ್ಷಕರಾದ ಶರಣಯ್ಯ ಹಿರೇಮಠ, ಉಮೇಶಗೌಡ ಪಾಟೀಲ್, ಕಂದಾಯ ಇಲಾಖೆ ಸಿಬ್ಬಂದಿ ಸುಂದರರಾಜ, ಚಂದ್ರು ಪೂಜಾರಿ ಹಾಗೂ ಸಿಬ್ಬಂದಿ ವರ್ಗ ಮತ್ತು ಹಡಪದ ಸಮುದಾಯದ ಪ್ರಮುಖರಾದ ರುದ್ರಪ್ಪ ಹಡಪದ, ನಿವೃತ್ತ ಎಎಸೈ ದೊಡ್ಡಪ್ಪ ಹಡಪದ, ಹಿರಿಯ ಪತ್ರಕರ್ತ ಮುಖೇಶ ನಿಲೋಗಲ್, ಶರಣಪ್ಪ ಆಡೂರು, ಮಹಾಂತೇಶ ಅಮರಾವತಿ, ಶಾಂತಪ್ಪ ಗಡಾದ ಟೇಲರ, ಚಳಗೇರಾ ಗ್ರಾ.ಪಂ. ಮಾಜಿ ಅಧ್ಯಕ್ಷ ಮಹಾಂತೇಶ ಹಡಪದ, ಮಹಾಂತೇಶ ಹಡಪದ ಬೇನಿಗಿಡ, ಹನುಮಂತ ಹಡಪದ ಸೇರಿದಂತೆ ಮೊದಲಾದವರು ಇದ್ದರು.

ಬಳಿಕ ಗುರುಪೌರ್ಣಿಮೆ ಹಾಗೂ ಹಡಪದ ಅಪ್ಪಣ್ಣನವರ ಜಯಂತಿ ಹಿನ್ನೆಲೆ ಇಲ್ಲಿನ ಶ್ರೀ ಬಸವೇಶ್ವರ ವೃತ್ತದ ಬಳಿಯ ಬಸವ ಭವನದ ಅಶ್ವಾರೂಢ ಬಸವಣ್ಣನವರ ಪ್ರತಿಮೆಗೆ ಬಸವ ಅನುಯಾಯಿಗಳು ಹೂಮಾಲೆ ಹಾಕಿ ಗೌರವ ಸಮರ್ಪಿಸಿದರು.

ಅದೇರೀತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲ ಡಾ.ಎಸ್.ವಿ.ಡಾಣಿ ಮತ್ತು ಉಪನ್ಯಾಸಕರು ಹಾಗೂ ವಿದ್ಯಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕರು ಹಾಗೂ ಸಹಶಿಕ್ಷಕರು ಹಡಪದ ಅಪ್ಪಣ್ಣನವರ ಭಾವಚಿತ್ರ ಪೂಜಿಸುವ ಮೂಲಕ ಗೌರವ ಸಮರ್ಪಿಸಿ ಸರಳವಾಗಿ ಜಯಂತಿ ಆಚರಿಸಿದರು.

ಗೌರಿ ನಗರದಲ್ಲಿರುವ ನಿಜಸುಖಿ ಶರಣ ಹಡಪದ ಅಪ್ಪಣ್ಣನವರ ಸಮುದಾಯ ಭವನದಲ್ಲಿ ಸಮುದಾಯ ಬಾಂಧವರು ಅಪ್ಪಣ್ಣನವರ ಭಾವಚಿತ್ರ ಪೂಜಿಸಿ ಸರಳವಾಗಿ ಜಯಂತಿ ಆಚರಿಸಿದರು.