ಸಂಗಮೇಶ ಮುಶಿಗೇರಿ
ಸುದ್ದಿ ಸಮರ್ಪಣ |
ಕುಷ್ಟಗಿ : ಹಲವಾರು ಮಹನೀಯರು ತ್ಯಾಗ, ಬಲಿದಾನದ ಮೂಲಕ ನಮಗೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ ಎಂಬುದರ ಕಲ್ಪನೆ, ಸಾಮಾಜಿಕ ಚಿಂತನೆ ಈಗಿನ ಯುವಜನಾಂಗಕ್ಕಿಲ್ಲ ಎಂದು ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರು ಅವರು ಹೇಳಿದರು.
ಅವರು ಪಟ್ಟಣದ ಬಸವ ಭವನದಲ್ಲಿ ಬುಧವಾರ ಶ್ರೀ ಮುರಡಿ ಭೀಮಜ್ಜ ಪುಣ್ಯಸ್ಮರಣೆ ಆಚರಣೆ ಸಮಿತಿ ವತಿಯಿಂದ ಆಯೋಜಿಸಿದ್ದ ಹೈದರಾಬಾದ್-ಕರ್ನಾಟಕ ಪ್ರಾಂತ್ಯ ವಿಮೋಚನೆಗೆ ಹೋರಾಡಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪರಮಪೂಜ್ಯ ಮಹಾತಪಸ್ವಿ ಮುರಡಿ ಭೀಮಜ್ಜ ಅವರ 68ನೇ ಪುಣ್ಯತಿಥಿ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ಪುಂಡಲೀಕಪ್ಪ ಜ್ಞಾನಮೋಟೆ ಅವರ 11ನೇ ಪುಣ್ಯಸ್ಮರಣೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬುದ್ದಿವಂತರಾಗಿದ್ದ ಮುರಡಿ ಭೀಮಜ್ಜ, ಪುಂಡಲೀಕಪ್ಪ ಜ್ಞಾನಮೋಟೆ ಅವರಾರು ಪಿಎಚ್ಡಿ ಮಾಡಿದವರಲ್ಲ. ವಿದ್ಯೆಯಿಲ್ಲದಿದ್ದರೂ ಅವರಲ್ಲಿ ಸಮಾಜದ ಬಗ್ಗೆ ಚಿಂತನೆಯಿತ್ತು. ಸಮಾಜವನ್ನು ಕಟ್ಟುವುದು ಹುರಿದುಂಬಿಸುವ ಶಕ್ತಿ ಅವರಲ್ಲಿತ್ತು. ವಿದ್ಯಾವಂತರಾಗಬೇಕು, ದುಡಿಯಬೇಕು ತಮ್ಮನ್ನು ರಕ್ಷಣೆ ಮಾಡಿಕೊಳ್ಳಬೇಕು ಎಂಬುದು ಬಿಟ್ಟರೆ ಈ ಐದಾರು ವರ್ಷದ ಪೀಳಿಗೆಯಲ್ಲಿ ಯಾವುದೇ ಸಾಮಾಜಿಕ ಜ್ಞಾನವಿಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ. ವಿದ್ಯೆ ಸಾಕಷ್ಟಿದೆ ಆದರೆ, ನಮ್ಮಲ್ಲಿ ಬುದ್ಧಿಯಿಲ್ಲ ಎಂದು ಬಯ್ಯಾಪೂರು ಬೇಸರ ವ್ಯಕ್ತಪಡಿಸಿದರು. ಹೈ.ಕ. ಪ್ರಾಂತ್ಯ ಪರತಂತ್ರದಲ್ಲಿ ಬದುಕಬೇಕಾದಂತ ಕಾಲದಲ್ಲಿ ನಿಜಾಮ ಆಡಳಿತದ ಕ್ರೌರ್ಯ, ಮಹಿಳೆಯರ ಮೇಲಿನ ಅತ್ಯಾಚಾರ, ಅಟ್ಟಹಾಸದಂತ ಸಾವಿರಾರು ಘಟನೆಗಳು ನಡೆದವು ಎಂಬುದರ ಕುರಿತು ಅಂದು ನಾವು ಹಿರಿಯರಿಂದ ತಿಳಿದಿದ್ದೇವೆ. ಆದರೆ, ಇಂದು ಹಳ್ಳಿಗಳಲ್ಲಿ ನಿಜಾಮರ ಆಡಳಿತದ ಬಗ್ಗೆ ಕೇಳಿದರೆ ಜನರಿಂದ ಏನೂ ಗೊತ್ತಿಲ್ಲ ಎಂಬ ಉತ್ತರ ಸಿಗುತ್ತಿದ್ದು, ಸ್ವಾತಂತ್ರ್ಯ ಹೇಗೆ ಸಿಕ್ಕಿತು ಎಂಬ ಅರಿವು ಇಲ್ಲದಾಗಿದೆ ಎಂದರು.
ಸ್ವಾತಂತ್ರ್ಯ ಹೋರಾಟದ ಕುರಿತು ಹಲವು ಪುಸ್ತಕಗಳು ಹೊರಬಂದಿವೆ. ಆದರೆ, ಪುಸ್ತಕ ಓದುವುದ ಮರೆತಿದ್ದಾರೆ. ಈ ತಾಂತ್ರಿಕ ಯುಗದಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಇದೆ. ಸ್ವಾತಂತ್ರ್ಯ ಹೋರಾಟದ ಬಗ್ಗೆ ಜಾಲತಾಣದಲ್ಲಿ ಸಾಕಷ್ಟು ಮಾಹಿತಿ ಲಭ್ಯವಿದ್ದರೂ ಸಹ ಮೋಬೈಲಲ್ಲಿ ಬೇರೆಯೇ ನೋಡುತ್ತಾರೆ. ಮೊಬೈಲ್ ಇಲ್ಲದಿದ್ದರೆ ಮಗು ಊಟ ಮಾಡದಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಹೈದರಾಬಾದ್ ಕರ್ನಾಟಕ ಸ್ವಾತಂತ್ರ್ಯ ಹೋರಾಟದ ಕುರಿತು ಮಾಹಿತಿ ದೊರೆಯಲಿ ಎಂಬ ಕಾರಣಕ್ಕೆ ರಾಜ್ಯದ ಎಲ್ಲಾ ಶಾಸಕರುಗಳಿಗೆ ಸ್ವಾತಂತ್ರ್ಯ ಸೇನಾನಿ ಮಾಜಿ ಶಾಸಕ ಪುಂಡಲೀಕಪ್ಪ ಜ್ಞಾನಮೋಟೆ ಅವರ ಹಾಗೂ ಈ ಭಾಗದ ಹೋರಾಟಗಾರರ ಕುರಿತು ರಚಿಸಿದ ಪುಸ್ತಕ ತಲುಪಿಸುವ ಕಾರ್ಯ ಮಾಡಿದ್ದೇನೆ ಎಂದು ತಿಳಿಸಿದರು.
ಪುಂಡಲೀಕಪ್ಪ ಜ್ಞಾನಮೋಟೆ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಒಂದು ಕಾರು ಸಹ ಹೊಂದಿದ್ದಿಲ್ಲ. ಪಾದಯಾತ್ರೆ ಅಥವ ಎತ್ತಿನ ಬಂಡಿಯಲ್ಲಿ ಸಂಚರಿಸುತಿದ್ಧರು ಎಂದು ಅಂದಿನ ಆಡಳಿತ ಸರಳತೆ, ನಿಷ್ಠೆ ಕುರಿತು ಹೇಳಿದ ಅವರು. ಇಂದು ಪ್ರತಿಯೊಂದು ಸಣ್ಣ ಹಳ್ಳಿಯಲ್ಲಿ ಐದಾರು ಕಾರುಗಳನ್ನು ಕಾಣುತ್ತೇವೆ. ಜನ ಆರ್ಥಿಕವಾಗಿ ಸಬಲರಾಗಿದ್ದಾರೆ. ಆದರೆ, ಭೌತಿಕವಾಗಿ ದುರ್ಭಲರಾಗಿದ್ದಾರೆ. ಇದರಿಂದ ಮಾನವೀಯ ಮೌಲ್ಯಗಳು ನಶಿಸಿ ಹೋಗುತ್ತಿವೆ. ಮಾನವೀಯ ಮೌಲ್ಯಗಳು ತುಂಬುವ ಕೆಲಸವಾಗಬೇಕಿದೆ. ಯುವ ಪೀಳಿಗೆಯಲ್ಲಿ ದೇಶದ ಸ್ವಾತಂತ್ರ್ಯದ ಅರಿವು ಮೂಡಲಿ ಎಂಬ ದೃಷ್ಟಿಯಿಂದ ಪುಂಡಲೀಕಪ್ಪ ಜ್ಞಾನಮೋಟೆ ಅವರು ತಪಸ್ವಿ ಮುರಡಿ ಭೀಮಜ್ಜ ಅವರ ಪುಣ್ಯ ಸ್ಮರಣೆ ಆಚರಿಸುತಿದ್ದರು ಹೊರತು ತಮ್ಮ ಆಚರಣೆಗಲ್ಲ ಎಂಬುದನ್ನು ತಿಳಿಯಬೇಕು. ಕಳೆದ 11 ವರ್ಷಗಳಿಂದ ಅವರ ಕುಟುಂಬಸ್ಥರು ಕಾರ್ಯಕ್ರಮ ಮುನ್ನಡೆಸಿಕೊಂಡು ಹೊರಟಿರುವುದು ಶ್ಲಾಘನೀಯ ಎಂದು ಹೇಳಿದರು.
ಈ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಯಚೂರಿನ ಹಿರಿಯ ಸಾಹಿತಿ ರಾಮಣ್ಣ ಹವಳೆ ಅವರಿಗೆ ಫಲ ಪುಷ್ಪ ನೀಡಿ ಶಾಲು ಹೊದಿಸಿ ಗೌರವಿಸಲಾಯಿತು.
ಬಳಿಕ ಪಂಡರಾಪೂರು ಪುಂಡಲೀಕಪ್ಪ ಜ್ಞಾನಮೋಟೆ ಅವರ ಸ್ಮರಣಾರ್ಥವಾಗಿ ಬಡ ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕುಷ್ಟಗಿ ತಾಲೂಕಿನಲ್ಲಿ ಹೈ.ಕ. ಸ್ವಾತಂತ್ರ್ಯ ಹೋರಾಟಗಾರ ಪಾತ್ರ ಕುರಿತು ಏರ್ಪಡಿಸಿದ್ದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸುಜಾತಾ ಮೇಟಿ ಹಾಗೂ ದ್ವಿತೀಯ ಸ್ಥಾನ ಪಡೆದ ಶ್ರೀ ಮರಿಶಾಂತವೀರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಕಾವೇರಿ ಕನ್ನಾಳ ಹಾಗೂ ತೃತೀಯ ಸ್ಥಾನಗಳನ್ನು ಪಡೆದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿನಿ ಐಶ್ವರ್ಯ, ಶ್ರೀದೇವಿ ವಡಿಗೇರಿ ಇವರಿಗೆ ಬಹುಮಾನ ವಿತರಿಸಲಾಯಿತು.
ಪಂಡರಾಪೂರು ಭಜನಾ ಮಂಡಳಿಯ ರಮೇಶ ಗೋಂದಡೆ ಹಾಗೂ ಮನ್ನಾಪೂರ ಸಂತರಿಂದ ಪ್ರಾರ್ಥನೆ ಸಲ್ಲಿಸಿದರು. ಬಳ್ಳಾರಿಯ ಕುಮಾರಿ ಸ್ಮಿತಾ, ಸಾನ್ವಿ ಝಾಡೆ ಅವರು ಭರತನಾಟ್ಯ ಪ್ರದರ್ಶಿಸಿ ಗಮನ ಸೆಳೆದರು. ಭಾವಸಾರ ಬಂಧು ಸೇವಾ ಟ್ರಸ್ಟನ ಅಧ್ಯಕ್ಷ ಅಮೃತರಾಜ ಜ್ಞಾನಮೋಟೆ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಎ.ವೈ.ಲೋಕರೆ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಬಾಗಲಕೋಟೆಯ ಪ್ರಭಾಕರ ದಾದಾ ಭಜರಂಗ ಬುವಾ ಬೋದಲೆ ಮಹಾರಾಜ, ಯಶವಂತ ಮಹಾರಾಜ ಬೋದಲೇ, ಬಳ್ಳಾರಿ ರಮೇಶ್ ಗೋಂದಲೆ ಸಾನ್ನಿಧ್ಯ ವಹಿಸಿದ್ದರು.
ಈ ವೇಳೆ ನ್ಯಾಯವಾದಿ ಶಿವಪ್ಪ ಸಿ. ನೀರಾವರಿ, ಪರಶುರಾಮ ಜ್ಞಾನಮೋಟೆ, ಕಸಾಪ ತಾಲೂಕು ಅಧ್ಯಕ್ಷ ವೀರೇಶ ಬಂಗಾರಶೆಟ್ಟರ್ ಉಪಸ್ಥಿತರಿದ್ದರು.
ಅತ್ಯಂತ ಹಿಂದುಳಿದ ಪ್ರದೇಶವಾದ ಹೈ.ಕ. ಪ್ರದೇಶ ಕಲ್ಯಾಣವಾಗಲೆಂದು ಆರ್ಟಿಕಲ್ 371ಜೆ ಮೀಸಲಾತಿಯನ್ನು ನಾವೆಲ್ಲರೂ ಹೋರಾಟ ಮಾಡಿ ಪಡೆದಿದ್ದೇವೆ. ಅದೀಗ ದುರೂಪಯೋಗವಾಗುತ್ತಿದೆ ನಮ್ಮವರೇ ವಿಜಯಪುರ ಸೇರಿದಂತೆ ಬೇರೆ ಊರಿನ ಬೀಗರು, ನೆಂಟರಿಷ್ಟರನ್ನು ಕರೆತಂದು ಕುಷ್ಟಗಿ ಗಡಿಭಾಗದಲ್ಲಿ ಮನೆ ಮಾಡಿ ಅವರ ಮಕ್ಕಳಿಗೆ ಮೀಸಲು ಕೊಡಿಸಲು ಓಟರ್ ಐಡಿ, ಆಧಾರ ಕೊಡಿಸಲು ಯತ್ನಿಸುತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅದು ಯಾವಾಗ ಕಲ್ಯಾಣ ಕರ್ನಾಟಕ ಆಗುತ್ತದೋ ಗೊತ್ತಿಲ್ಲ.
– ಅಮರೇಗೌಡ ಪಾಟೀಲ್ ಬಯ್ಯಾಪೂರು
ಮಾಜಿ ಸಚಿವರು, ಮಾಜಿ ಶಾಸಕರು ಕುಷ್ಟಗಿ.