ಸಂಗಮೇಶ ಮುಶಿಗೇರಿ
ಸುದ್ದಿ ಸಮರ್ಪಣ |
ಕುಷ್ಟಗಿ : ಇಂದಿನ ಪ್ರತಿಯೊಬ್ಬ ಸರ್ಕಾರಿ ನೌಕರರಿಗೆ ತಮ್ಮ ಕರ್ತವ್ಯದ ಆತ್ಮಾವಲೋಕನ ಅಗತ್ಯವಿದೆ ಎಂದು ಕೊಪ್ಪಳ – ರಾಯಚೂರು ಲೋಕಾಯುಕ್ತ ಎಸ್ಪಿ ಎಂ.ಎನ್.ಶಶಿಧರ ಅವರು ಹೇಳಿದರು.
ಅವರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ ಕೊಪ್ಪಳ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಸಾರ್ವಜನಿಕ ಕುಂದು-ಕೊರತೆಗಳು ಮತ್ತು ಅಹವಾಲುಗಳ ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರಿ ನೌಕರರ ಹಿತ ಕಾಯೋದಕ್ಕೆ ಸರ್ಕಾರ ಇರುತ್ತದೆ. ಸಾರ್ವಜನಿಕರ ಹಿತ ನೌಕರರು ಕಾಯಬೇಕು. ಪರೀಕ್ಷೆ ಪಾಸಾಗಿ, ದೇವರ ಆಶೀರ್ವಾದ, ಗುರು-ಹಿರಿಯರ ಹಾರೈಕೆ ಫಲವಾಗಿ ಸರ್ಕಾರಿ ನೌಕರಿ ಪಡೆಯುತ್ತೇವೆ. ಸರ್ಕಾರಿ ಸೇವೆಗೆ ಸೇರಿದ ಮೇಲೆ ಸಂವಿಧಾನ ಬದ್ಧವಾಗಿ ಎಲ್ಲಾ ಸೌಲಭ್ಯ, ಮೂಲಭೂತ ಹಕ್ಕುಗಳು ಬೇಕೆಂಬುವುದಾದರೆ, ಅದೇ ಸಂವಿಧಾನದ ಮೂಲಭೂತ ಹಕ್ಕುಗಳಂತೆ ಸೇವೆ ಕೊಡುವುದು ಬೇಡ ಎನ್ನುವ ಮನಸ್ಥಿತಿಯೇಕೆ? ದೇಶದ ನಾಗರಿಕ ಸೇವಕನಾಗಿ ನಾನೇನು ಮಾಡಬೇಕು ಎಂಬುದನ್ನು ಅರಿತುಕೊಂಡು ನೂರಕ್ಕೆ ನೂರರಷ್ಟು ಸಾರ್ವಜನಿಕರ ಕೆಲಸ ಅಚ್ಚುಕಟ್ಟಾಗಿ ಮಾಡಲು ಸಾಧ್ಯವಿದೆ ಎಂದರು.
ಸರ್ಕಾರಿ ನಾಕರಿ ಎಂದರೆ ದೇವರ ಕೆಲಸ ಇದ್ದಂತೆ. ಶ್ರದ್ಧೆ-ಭಕ್ತಿ ಪ್ರಮಾಣಿಕತೆ ಹಾಗೂ ಎಚ್ಚರಿಕೆಯಿಂದ ಕಾನೂನುಬದ್ಧವಾಗಿ ಸಾರ್ವಜನಿಕರ ಸೇವೆ ಮಾಡಬೇಕು. ಸಾರ್ವಜನಿಕರು ಹೊತ್ತು ತರುವ ಯಾವುದೇ ಕೆಲಸವಿರಲಿ, ನಿಯಮಬಾಹೀರವಾಗಿದೆಯೇ ಅಥವಾ ನಿಯಮಾನುಸಾರವಿದೆಯಾ ಎಂದು ದಾಖಲೆಗಳನ್ನು ಪರಿಶೀಲಿಸಿ ಕೆಲಸ ಮಾಡಬೇಕು. ನಿಯಮ ಬಾಹೀರವಿದ್ದರೆ ತಿರಸ್ಕಾರ ಮಾಡಬೇಕು. ಇದಕ್ಕೆ ಸಂವಿಧಾನದಲ್ಲಿ ತಮಗೆ ಅವಕಾಶವಿದೆ. ಕೆಲ ಅಧಿಕಾರಿಗಳು ನಾವು ಲಂಚ ಪಡೆಯಲ್ಲ ಎಂದು ಪ್ರಾಮಾಣಿಕತೆ ಮೆರೆಯುತ್ತಾರೆ. ಆದರೆ, ಕೆಲಸ ಮಾಡದ ಅದೆಷ್ಟೋ ಫೈಲಗಳು ಹಾಗೆಯೇ ಉಳಿದಿರುತ್ತವೆ. ಪ್ರಾಮಾಣಿಕತೆ ಒಂದಿದ್ದರೆ ಸಾಲದು, ಕೆಲಸದಲ್ಲಿ ಪರಿಣಾಮಕಾರಿತ್ವ ಜೊತೆಗೆ ದಕ್ಷತೆ ಇರಬೇಕು. ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆಗಳು ಲಭ್ಯವಾಗಬೇಕು. ಫೈಲ್ ಕಳೆದಿದೆ, ಹಿಂದಿನ ಅಧಿಕಾರಿಗಳ ಮೇಲೆ ದೂರು ನೀಡಿ ಕರ್ತವ್ಯದಿಂದ ನುಣುಚಿಕೊಳ್ಳುವ ಎಂಬ ಇತ್ಯಾದಿ ನೆಪಗಳು ಹೇಳುವುದು ಸರಿಯಲ್ಲ. ನೌಕರಿಯಿದ್ದಾಗ ತಪ್ಪು ಎಸಗಿ ನಿವೃತ್ತರಾದ ಮೇಲೆ ಪಾರಾಗುತ್ತೇವೆ ಎಂದು ಭಾವಿಸಿದರೆ ಅದು ತಪ್ಪು. ನಿವೃತ್ತಿ ನಂತರವೂ ಕಾನೂನಿನ್ವರ ಕ್ರಮ ಜರುಗುತ್ತದೆ ಎಂದು ನೌಕರರು ತಿಳಿಯಬೇಕು ಎಂದರು.
ಪ್ರಾಮಾಣಿಕವಾಗಿ ಕೆಲಸ ಮಾಡುವ ನೌಕರರನ್ನು ಬ್ಲಾಕ್ ಮೇಲ್ ಮಾಡುವ ಒಂದು ವರ್ಗವಿರುತ್ತದೆ. ಅದನ್ನು ಎದುರಿಸುವ ಜಾಣ್ಮೆ ಇರಬೇಕು. ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಕಾನೂನು ಹಾಗೂ ಇಲಾಖೆಯ ನಿಯಮಗಳ ಬಗ್ಗೆ ತಿಳುವಳಿಕೆ ಇರದ ಜನಗಳಿರುತ್ತಾರೆ. ಅವರಿಗೆ ಅರಿವು ಮೂಡಿಸಬೇಕು ಎಂದ ತಿಳಿಸಿದ ಲೋಕಾಯುಕ್ತ ಎಸ್ಪಿ ಎಂ.ಎನ್.ಶಶಿಧರ, ಕಚೇರಿಗೆ ಬರುವ ಸಾರ್ವಜನಿಕರಿಗೆ ಮಧ್ಯವರ್ತಿಗಳಾರು, ಅಧಿಕಾರಿಗಳು ಯಾರು ಎಂಬುದು ಗೊತ್ತಾಗುವುದಿಲ್ಲ. ಸುಲಭವಾಗಿ ಗುರುತಿಸಲು ಅಧಿಕಾರಿಗಳು ತಮ್ಮ ಕೊರಳಲ್ಲಿ ಗುರುತಿನ ಕಾರ್ಡ್ ಧರಿಸಬೇಕು. ಕಾರ್ಯನಿರ್ವಹಿಸುವ ಟೇಬಲ್ ಮೇಲೆ ತಮ್ಮ ಪದನಾಮದ ಫಲಕ ಅಳವಡಿಸಬೇಕು. ಕಚೇರಿಯಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನ, ಕುಡಿಯುವ ನೀರು, ಶೌಚಾಲಯದಂಥ ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ತಮ್ಮ ರಕ್ಷಣೆಗೆ ಸಿಸಿ ಕ್ಯಾಮರಾ ಜೊತೆಗೆ ಕಚೇರಿಯಲ್ಲಿ ಸ್ಪಷ್ಟವಾಗಿ ಗೋಚರಿಸುವಂತೆ ಸಾರ್ವಜನಿಕರು ದೂರು ನೀಡಲು ಕಡ್ಡಾಯವಾಗಿ ಲೋಕಾಯುಕ್ತ ಮಾಹಿತಿ ನಾಮಫಲಕ ಅಳವಡಿಸಬೇಕು. ಸದ್ಯ ಬಂದಿರುವ ದೂರುಗಳಿಗೆ ಆಯಾ ಸಂಬಂಧಿಸಿದ ಇಲಾಖೆ ಅಧಿಕಾರಿಗಳು 15 ದಿನದಳೊಳಗೆ ಕೆಲಸ ಮಾಡಿಕೊಡಲು ಸೂಚಿಸಿದರು.
ಈ ವೇಳೆ ಲೋಕಾಯುಕ್ತ ಪ್ರಭಾರಿ ಡಿವೈಎಸ್ಪಿ ಚಂದ್ರಪ್ಪ ಈಟಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಿಂಗಪ್ಪ ಮಸಳಿ ಉಪಸ್ಥಿತರಿದ್ದರು. ಸಭೆಯಲ್ಲಿ ಗ್ರಾ.ಪಂಗಳ ಅಭಿವೃದ್ಧಿ ಅಧಿಕಾರಿಗಳು, ಕೃಷಿ ಇಲಾಖೆ, ಪುರಸಭೆ, ಸಾರಿಗೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ತಾಲೂಕು ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಸಾರ್ವಜನಿಕ ಸಭೆ ಆಯೋಜಿಸಲಾಗುತ್ತದೆ. ಅಧಿಕಾರಿಗಳು ಸಭೆಗೆ ಗೈರಾಗುವ ನೀಚ ಪದ್ಧತಿ ಬಿಡಬೇಕು. ಇಲ್ಲಿ ಪ್ರತಿಯೊಂದು ಇಲಾಖೆಯ ಕಾರ್ಯವೈಖರಿ ಮತ್ತು ದೂರುಗಳ ಕುರಿತು ಅಹವಾಲು ಪಡೆದು ಕರ್ನಾಟಕ ಲೋಕಾಯುಕ್ತ ಪ್ರಧಾನ ಕಚೇರಿಗೆ ವರದಿ ಮಾಡಲಾಗುತ್ತದೆ. ಅಲ್ಲಿಂದ ವಿಚಾರಣೆ ಆರಂಭವಾದರೆ ಇಲ್ಲಿಂದ ಅಲ್ಲಿಗೆ ಅಲೆದಾಡಬೇಕಾದ ಪರಿಸ್ಥಿತಿ ಎದುರಿಸಬೇಕಾಗುತ್ತದೆ.
– ಎಂ.ಎನ್.ಶಶಿಧರ,
ಲೋಕಾಯುಕ್ತ ಎಸ್ಪಿ, ಕೊಪ್ಪಳ – ರಾಯಚೂರು.